ಭಾರತೀಯ ಕ್ರೈಸ್ತ ಒಕ್ಕೂಟ ಮತ್ತು ಬೇತೇಲ್ ಪೆಂಟೆಕೋಸ್ಟಲ್ ಚರ್ಚ್, ಅಜ್ಜರಕಾಡು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಸುಮಾರು 20 ಪ್ರಮುಖ ತಂಡಗಳು ಭಾಗವಹಿಸಿದ್ದವು. ಸೌಹಾರ್ದತೆ ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.ರೋಚಕ ಫೈನಲ್ ಹಣಾಹಣಿ ಫೈನಲ್ ಪಂದ್ಯದಲ್ಲಿ ಯುಬಿಎಂ ಕ್ರಿಸ್ತಶಾಂತಿ ಚರ್ಚ್, ಉದ್ಯಾವರ ಮತ್ತು ಹೋಲಿ ರೋಸರಿ ಚರ್ಚ್ (HRC), ಕುಂದಾಪುರ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಕುಂದಾಪುರ ತಂಡವು ನಿಗದಿತ 4 ಓವರ್‌ಗಳಲ್ಲಿ 26 ರನ್ ಗಳಿಸಿತು ಕೇವಲ 27 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಉದ್ಯಾವರ ತಂಡದ ಪರವಾಗಿ ಡೆರಿನ್ ಪಿತ್ರೋಡಿ ಅವರು ಸ್ಫೋಟಕ ಬ್ಯಾಟಿಂಗ್ ನಡೆಸಿ, ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಸರಣಿ ಶ್ರೇಷ್ಠ (Man of the Series): ಡೆರಿನ್ ಪಿತ್ರೋಡಿ (ಉದ್ಯಾವರ), ಉತ್ತಮ ಬ್ಯಾಟ್ಸ್‌ಮನ್: ಅನಿಲ್ (HRC ಕುಂದಾಪುರ) ,ಉತ್ತಮ ಬೌಲರ್: ಸ್ಟಾರ್ವಿನ್ (ಉದ್ಯಾವರ), ಫೈನಲ್ ಪಂದ್ಯದ ಪುರುಷೋತ್ತಮ: ಡೆರಿನ್ ಪಿತ್ರೋಡಿ. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡಿ, "ಕ್ರೀಡೆಯು ಕೇವಲ ಗೆಲುವು-ಸೋಲಿಗೆ ಸೀಮಿತವಲ್ಲ, ಇದು ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮಾಧ್ಯಮ" ಎಂದು ಹಾರೈಸಿದರು. ವೇದಿಕೆಯಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ರಾಜ್ಯಾ ಉಪಾಧ್ಯಕ್ಷರಾದ ಡಾ. ಪ್ರದೀಪ್ ಡಿಮೆಲೊ, ಪಾಸ್ಟರ್ ಸ್ಟೀಫನ್ ಜಮಖಂಡಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾದ ರಮೇಶ್ ಕಾಂಚನ್, ಹಾಗೂ ಸರೋಜಾ ಜಮಖಂಡಿ, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತನ್ನ , ಸದಾನಂದ ಕಾಂಚನ್, ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಫ್ರಾಂಕ್ಲಿ ಡಿಸೋಜಾ, ಗಣ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ವಿಜೇತ ಯುಬಿಎಂ ಕ್ರಿಸ್ತಶಾಂತಿ ಚರ್ಚ್, ಉದ್ಯಾವರ ತಂಡಕ್ಕೆ 77,777 ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಈ ಪಂದ್ಯಾವಳಿಯು ಯುವಜನರಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ಕ್ರೈಸ್ತ ಸಮುದಾಯದ ವಿವಿಧ ಪಂಗಡಗಳ ನಡುವೆ ಒಗ್ಗಟ್ಟನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
Local News
ಭಾರತೀಯ ಕ್ರೈಸ್ತ ಒಕ್ಕೂಟ ಮತ್ತು ಬೇತೇಲ್ ಪೆಂಟೆಕೋಸ್ಟಲ್ ಚರ್ಚ್, ಅಜ್ಜರಕಾಡು ಇವರ ಜಂಟಿ ಆಶ್ರಯದಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಟ್ರೋಫಿ - 2026
- by Pramod
- FEBRUARY 17, 2026